ಬೆಂಗಳೂರು: ಸುಗಮ ಸಂಚಾರ ಒಂದು ಮರೀಚಿಕೆಯೇ?

ಇಂದು (ನ. ೨೬) ವಿಶ್ವ ಸುಸ್ಥಿರ ಸಂಚಾರ ದಿನ (ವರ್ಲ್ಡ್ ಸಸ್ಟೇನಬಲ್ ಟ್ರಾನ್ಸ್‌ಪೋರ್ಟ್ ಡೇ). ಸುಗಮ, ಸುರಕ್ಷಿತ, ಮಿತವ್ಯಯದ, ಸುಲಭವಾಗಿ ಲಭ್ಯವಿರುವ, ಕಾರ್ಯಕ್ಷಮ ಮತ್ತು ಪರಿಸರಸ್ನೇಹಿ ಸಂಚಾರ ವ್ಯವಸ್ಥೆಗಳಾದ ಸಾರ್ವಜನಿಕ ಸಾರಿಗೆ, ಸೈಕಲ್ ಸವಾರಿ, ಕಾಲ್ನಡಿಗೆ, ಪರ್ಯಾಯ ಇಂಧನ ವಾಹನಗಳ (ವಿದ್ಯುತ್ ಚಾಲಿತ ವಾಹನ – ಇವಿ) ಬಗ್ಗೆ ಅರಿವು ಮೂಡಿಸಲು ವಿಶ್ವಸಂಸ್ಥೆಯು ೨೦೨೩ರಿಂದ ಈ ದಿನವನ್ನು ಆಚರಿಸುತ್ತಿದೆ.

ಬನ್ನಿ, ಬೆಂಗಳೂರಿನ ಸುಸ್ಥಿರ ಸಂಚಾರದ ಸ್ಥಿತಿಗತಿ ಹೇಗಿದೆ ಎಂಬುದರ ಬಗ್ಗೆ ವಿಮರ್ಶೆ ಮಾಡೋಣ.

ಸಂಚಾರ ದಟ್ಟಣೆ ಮತ್ತು ಅದರ ಪರಿಣಾಮಗಳು

ಹೆಚ್ಚು ಸಂಚಾರ ದಟ್ಟಣೆ ಇರುವ ನಗರ ಎಂಬ (ಕು)ಖ್ಯಾತಿ ಬೆಂಗಳೂರಿಗಿದೆ. ಟಾಮ್‌ಟಾಮ್ ಟ್ರಾಫಿಕ್ ಇಂಡೆಕ್ಸ್ ಪ್ರಕಾರ ದೇಶದಲ್ಲಿ ಅತೀ ಹೆಚ್ಚು ಮತ್ತು ವಿಶ್ವದಲ್ಲೇ ಎರಡನೇ ಹೆಚ್ಚು ದಟ್ಟಣೆ ಈ ನಗರದಲ್ಲಿದೆ. ಒಬ್ಬ ಶ್ರೀಸಾಮಾನ್ಯ ಪ್ರಯಾಣಿಕನು ವರ್ಷದಲ್ಲಿ, ಸುಮಾರು ೧೬೮ ಗಂಟೆಗಳನ್ನು (ಅಂದರೆ, ಒಂದು ಪೂರ್ಣ ವಾರದಷ್ಟು ಸಮಯವನ್ನು) ಟ್ರಾಫಿಕ್ ಜಾಮ್‌ನಲ್ಲೇ ಕಳೆಯುತ್ತಾನೆ ಎಂದು ಟಾಮ್‌ಟಾಮ್ ಅಂದಾಜಿಸುತ್ತದೆ. ಇದು ಕೇವಲ ದೈನಂದಿನ ಸಂಚಾರದ ಸಮಸ್ಯೆಯಲ್ಲ ಎಂಬುದಕ್ಕೆ ೨೦೨೨ರ ಆಗಸ್ಟ್‌ನಲ್ಲಿ ಮಾರತ್ತಹಳ್ಳಿ–ಸರ್ಜಾಪುರ ರಸ್ತೆಯಲ್ಲಿ ಉಂಟಾದ ಪ್ರವಾಹದಿಂದ ಐದು ಗಂಟೆಗಳ ಕಾಲ ಸ್ಥಗಿತಗೊಂಡ ಸಂಚಾರ, ೨೦೨೩ರ ಸೆಪ್ಟೆಂಬರ್ ೨೭ರಂದು ಹೊರ ವರ್ತುಲ ರಸ್ತೆಯಲ್ಲಿ ಸಾವಿರಾರು ಪ್ರಯಾಣಿಕರು ಗಂಟೆಗಟ್ಟಲೆ ಸಿಲುಕಿದ ಘಟನೆ ಹಾಗೂ ೨೦೨೪ರ ಅಕ್ಟೋಬರ್‌ನಲ್ಲಿ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ ಉಂಟಾದ ಭಾರೀ ಸಂಚಾರ ದಟ್ಟಣೆ ಸಾಕ್ಷಿಯಾಗಿವೆ.

ಈ ದಟ್ಟಣೆ ನಿವಾಸಿಗರ ವೃತ್ತಿ/ವ್ಯವಹಾರ ಮತ್ತು ವೈಯಕ್ತಿಕ ಜೀವನದಲ್ಲಿ ಸಮಯದ ಮಿತಿ/ಅಭಾವ ಸೃಷ್ಟಿಸುವುದರ ಜೊತೆಗೆ ಅವರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಸೆಂಟರ್ ಫಾರ್ ಸ್ಟಡಿ ಆಫ್ ಸೈನ್ಸ್, ಟೆಕ್ನಾಲಜಿ ಅಂಡ್ ಪಾಲಿಸಿಯ (ಸಿಸ್ಟೆಪ್) ವಾಯು ಗುಣಮಟ್ಟ ಸಂಶೋಧನಾ ತಂಡ ನಡೆಸಿರುವ ಅಧ್ಯಯನದ ಪ್ರಕಾರ ನಗರದ ವಾಯು ಮಾಲಿನ್ಯದ ಅತೀ ಸೂಕ್ಷ್ಮ ಕಣಗಳ ಉತ್ಸರ್ಜನೆಯ (ಪಿಎಂ ೨.೫ ಎಮಿಷನ್ಸ್) ೬೦%ಕ್ಕೂ ಅಧಿಕ ಪಾಲು ವಾಹನ ಸಂಚಾರದಿಂದಲೇ ಬರುತ್ತವೆ ಎಂದು ತಿಳಿಸಿದೆ.

ಈ ಪಿಎಂ ೨.೫ ಕಣಗಳು ಶ್ವಾಸಕೋಶವಲ್ಲದೆ, ರಕ್ತಪ್ರವಾಹವನ್ನೂ ಪ್ರವೇಶಿಸಿ ಹೃದಯ ಮತ್ತು ಮೆದುಳಿನ ಮೇಲೆಯೂ ದುಷ್ಪರಿಣಾಮ ಬೀರುತ್ತವೆ. ಇದಲ್ಲದೆ, ವಾಹನಗಳಿಂದ ಹೊರಸೂಸುವ ಕಾರ್ಬನ್ ಮೊನೊಆಕ್ಸೈಡ್ (ಸಿಒ) ಮತ್ತು ನೈಟ್ರೋಜನ್ ಆಕ್ಸೈಡ್‌ಗಳು ಸಹ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಆದ್ದರಿಂದ, ವಾಯುಮಾಲಿನ್ಯವನ್ನು ತಗ್ಗಿಸುವ ನಿಟ್ಟಿನಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವುದು ಅತ್ಯವಶ್ಯಕವಾಗಿದೆ.

ಕಾರಣಗಳೇನು?

ಸಂಚಾರ ದಟ್ಟಣೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು, ಮೊದಲು ಸಮಸ್ಯೆಯ ಆಳವನ್ನು ಅರಿತು ಅದರ ಮೂಲ ಕಾರಣಗಳನ್ನು ಗುರುತಿಸುವುದು ಅತ್ಯವಶ್ಯಕ.

ನಗರದ ಜನಸಂಖ್ಯೆಯ ಬೆಳವಣಿಗೆ ಮತ್ತು ಜನರ ಖರೀದಿ ಸಾಮರ್ಥ್ಯ ಹೆಚ್ಚುತ್ತಿರುವುದರ ಪರಿಣಾಮವಾಗಿ ವೈಯಕ್ತಿಕ ವಾಹನಗಳ ಬಳಕೆ ಹೆಚ್ಚುತ್ತಿದ್ದು, ಇದು ಸಂಚಾರ ದಟ್ಟಣೆಯ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ನಗರದ ೮೦% ಮನೆಗಳಲ್ಲಿ ಕನಿಷ್ಠ ಒಂದು ವಾಹನವಿರುವುದು ಕಂಡುಬರುತ್ತದೆ. ಸಂಚಾರ ಯೋಜನಾಕಾರರಿಗೆ ಮತ್ತು ತಜ್ಞರಿಗೆ ತುಂಬಾ ಚಿಂತಾಜನಕವಾಗಿರುವ ಸಂಗತಿಯೆಂದರೆ ಹೆಚ್ಚುತ್ತಿರುವ ಕಾರುಗಳ ಸಂಖ್ಯೆ. ಏಕೆಂದರೆ, ಕಾರಿನಲ್ಲಿ ಪ್ರಯಾಣಿಸುವ ಒಬ್ಬ ಸಾಮಾನ್ಯ ವ್ಯಕ್ತಿ ಬಸ್ಸಿನಲ್ಲಿ ಪ್ರಯಾಣಿಸುವ ವ್ಯಕ್ತಿಗೆ ಹೋಲಿಸಿದರೆ ಕನಿಷ್ಠ ೨.೫ ಪಟ್ಟು ಹೆಚ್ಚು ರಸ್ತೆ ಸ್ಥಳವನ್ನು ಆಕ್ರಮಿಸಿಕೊಳ್ಳುತ್ತಾನೆ. ನಗರದಲ್ಲಿ ಕಾರುಗಳ ಸಂಖ್ಯೆ ೨೫ ಲಕ್ಷ ದಾಟಿದೆ. ಇದು ದೇಶದಲ್ಲೇ ಅಧಿಕ. ಕಳೆದ ಎರಡು ವರ್ಷಗಳಲ್ಲಿ ೩ ಲಕ್ಷಕ್ಕೂ ಅಧಿಕ ಕಾರುಗಳು ಬೆಂಗಳೂರಿನಲ್ಲಿ ನೋಂದಣಿಯಾಗಿವೆ. ಸರಾಸರಿ ೪೦೦ ಕಾರುಗಳು ಈಗಾಗಲೇ ದಟ್ಟಣೆಯಿಂದ ಕೂಡಿರುವ ರಸ್ತೆಗಳಿಗೆ ಪ್ರತಿದಿನ ಸೇರ್ಪಡೆಯಾಗುತ್ತಿರುವುದು ಚಿಂತಾಜನಕ.

ಸ್ವಂತ/ವೈಯಕ್ತಿಕ ವಾಹನಗಳ ಬಳಕೆಯನ್ನು ಕಡಿಮೆ ಮಾಡಿ, ಪರಿಸರಸ್ನೇಹಿ, ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವ ಹಾಗೂ ಸಂಚಾರ ದಟ್ಟಣೆ ಕಡಿಮೆ ಮಾಡುವ ಸಾರ್ವಜನಿಕ ಸಾರಿಗೆ ಬಳಕೆಯನ್ನು ಹೆಚ್ಚಿಸುವ ಕುರಿತು ಜಾಗೃತಿ ಮೂಡಿಸುವುದೇ ಈ ದಿನದ ಉದ್ದೇಶ.

ಎರಡು ಹೆಜ್ಜೆ ಮುಂದೆ, ನಾಲ್ಕು ಹೆಜ್ಜೆ ಹಿಂದೆ

ಸುಸ್ಥಿರ ಸಂಚಾರಕ್ಕಾಗಿ ನಗರದಲ್ಲಿ ಆಗಿರುವ ಅಭಿವೃದ್ಧಿಗಳು ಹಲವಾರಿವೆ. ಸಾರ್ವಜನಿಕ ಸಾರಿಗೆ ಬಳಕೆ, ಅದರಲ್ಲೂ ಬಸ್ ಪ್ರಯಾಣಿಕರ ಸಂಖ್ಯೆ ‘ಶಕ್ತಿ’ ಯೋಜನೆ ನಂತರ ಹೆಚ್ಚುತ್ತಿರುವುದು ಗಮನಾರ್ಹ. ವರದಿಗಳ ಪ್ರಕಾರ ಯೋಜನೆಯ ನಂತರ ದೈನಂದಿನ ಬಸ್ ಪ್ರಯಾಣಗಳ ಸಂಖ್ಯೆ (ಡೈಲಿ ರೈಡರ್ಶಿಪ್) ಸುಮಾರು ೪೫ ಲಕ್ಷಕ್ಕೇರಿದೆ. ಹಳದಿ ಮತ್ತು ಗುಲಾಬಿ ಮಾರ್ಗಗಳ ಉದ್ಘಾಟನೆಯ ನಂತರ ಮೆಟ್ರೋ ಡೈಲಿ ರೈಡರ್ಶಿಪ್ ಸುಮಾರು ೧೦ ಲಕ್ಷ ದಾಟಿದೆ. ಬಸ್ ಮತ್ತು ಮೆಟ್ರೋಗಳಲ್ಲಿ ಚಿಲ್ಲರೆ ಕೊರತೆಯ ಸಮಸ್ಯೆಯನ್ನು ಪರಿಹರಿಸಲು ಯುಪಿಐ ಮೂಲಕ ಟಿಕೆಟ್ ಖರೀದಿಸುವ ಸೌಲಭ್ಯ ಕಲ್ಪಿಸಲಾಗಿದೆ. ಬಸ್ ಮತ್ತು ಮೆಟ್ರೋ ಎರಡರಲ್ಲೂ ಪ್ರಯಾಣಕ್ಕೆ ಬಳಸಬಹುದಾದ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ) ಸೌಲಭ್ಯವೂ ಇದೆ. ‘ಬಸ್ ಎಲ್ಲಿ ಇದೆ?’, ‘ಯಾವಾಗ ಬರುತ್ತದೆ?’ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಲು ನಮ್ಮ ಬಿಎಂಟಿಸಿ (೨ನೇ ಆವೃತ್ತಿ) ಆ್ಯಪ್ ಬಿಡುಗಡೆ ಮಾಡಲಾಗಿದೆ. ಈ ಎಲ್ಲಾ ಕ್ರಮಗಳು ಸಾರ್ವಜನಿಕ ಸಾರಿಗೆ ಪ್ರಯಾಣವನ್ನು ಅನುಕೂಲಕರವಾಗಿಸಿವೆ.

ಆದರೆ, ನ.೫ರಿಂದ ಬಸ್ ಪ್ರಯಾಣ ದರವನ್ನು ೬೭% ವರೆಗೆ ಏರಿಕೆ ಮಾಡಿರುವುದು ತುಂಬಾ ಕಳವಳ ಮೂಡಿಸಿದೆ. ಬೆಲೆ ಏರಿಕೆ ನಂತರ ಬಸ್ಸಿನಲ್ಲಿ ಒಂದು ನಿಲ್ದಾಣದಿಂದ ಹತ್ತಿ ೧ ಕಿ.ಮೀ ಮುಂದಿನ ನಿಲ್ದಾಣದಲ್ಲಿ ಇಳಿದರೆ, ₹೧೦ ದರ ಕೊಡಬೇಕು. ವಿಪರ್ಯಾಸವೇನೆಂದರೆ, ಇದಕ್ಕೆ ಹೋಲಿಸಿದರೆ ೩೦-೪೦ ಕಿ.ಮೀ ಪ್ರತಿ ಲೀಟರ್ ಮೈಲೇಜ್ ಕೊಡುವ ದ್ವಿಚಕ್ರ ವಾಹನದ ಚಾಲನಾ ವೆಚ್ಚ ೭೫% ವರೆಗೆ ಅಗ್ಗವಾಗಿದೆ ಮತ್ತು ೧೦-೧೨ ಕಿ.ಮೀ ಪ್ರತಿ ಲೀಟರ್ ಮೈಲೇಜ್ ಕೊಡುವ ಕಾರಿನ ಪ್ರಯಾಣ ವೆಚ್ಚ ಬಸ್ ಪ್ರಯಾಣ ದರಕ್ಕೆ ಸಮಾನವಾಗಿದೆ.

ಬೆಂಗಳೂರು ಮೆಟ್ರೋ ದೇಶದಲ್ಲೇ ಅತ್ಯಂತ ದುಬಾರಿ ದರ ಹೊಂದಿರುವುದು ಇಲ್ಲಿ ಗಮನಾರ್ಹ. ಒಟ್ಟಾರೆ, ಇವೆಲ್ಲವೂ ಸಾರ್ವಜನಿಕ ಸಾರಿಗೆಯ ಮೂಲ ತತ್ವವಾದ ಅಗ್ಗದ ಮತ್ತು ಎಲ್ಲರಿಗೂ ಕೈಗೆಟುಕುವ ಸೇವೆಗೆ ತದ್ವಿರುದ್ಧವಾಗಿವೆ.

ಮಾರ್ಗೋಪಾಯಗಳೇನು?

ಬಸ್ ಮತ್ತು ಮೆಟ್ರೋಗಳ ಕಡೆ ಜನರನ್ನು ಆಕರ್ಷಿಸುವುದು ಮತ್ತು ಕಾರು, ದ್ವಿಚಕ್ರ ವಾಹನ ಬಳಕೆ ತಗ್ಗಿಸುವಂತೆ ಪ್ರೇರೇಪಿಸುವುದು ದಟ್ಟಣೆ ನಿರ್ವಹಣೆಯ ಮೂಲ ತತ್ವವಾಗಿದೆ.

ಸಾರ್ವಜನಿಕ ಸಾರಿಗೆಯನ್ನು ಸುರಕ್ಷಿತ, ಅನುಕೂಲಕರ, ಮತ್ತು ಕೈಗೆಟುಕುವಂತೆ ಮಾಡುವುದು ಅನಿವಾರ್ಯ. ದಿನಗೂಲಿ ನೌಕರರು, ಕಟ್ಟಡ ಕಾರ್ಮಿಕರು, ಮತ್ತು ಇತರ ಅಲ್ಪ ಆದಾಯ ಇರುವ, ವಾಹನ ಖರೀದಿಸಲಾಗದ ಜನರಿಗೆ ಬಸ್ ಸಾರಿಗೆ ಜೀವನಾಡಿ. ಬಸ್ ದರ ಏರಿಕೆ ಅವರ ಜೀವನದ ಮೇಲೆ ಪರಿಣಾಮ ಬೀರಬಲ್ಲದು. ಹಾಗಾಗಿ ಬಸ್ ಪ್ರಯಾಣ ದರ ಏರಿಕೆಯ ಬಗ್ಗೆ ಪುನರ್ವಿಚಾರ ಅತ್ಯಗತ್ಯ.

೧.೨-೧.೩ ಕೋಟಿ ಜನಸಂಖ್ಯೆ ಇರುವ ಬೆಂಗಳೂರಿನಲ್ಲಿ, ಒಂದು ಅಂದಾಜಿನ ಪ್ರಕಾರ ೭೫%, ಅಂದರೆ ಸುಮಾರು ೯೦ ಲಕ್ಷ ಜನ ಕೆಲಸಕ್ಕೆ ಹೋಗುವವರಿದ್ದಾರೆ (ವರ್ಕಿಂಗ್ ಪಾಪುಲೇಷನ್). ಬಸ್ ಮತ್ತು ಮೆಟ್ರೋ ಒಟ್ಟಾರೆ ಡೈಲಿ ರೈಡರ್ಶಿಪ್ ಸುಮಾರು ೬೦ ಲಕ್ಷ (೩೦-೪೦ ಲಕ್ಷ ಪ್ರಯಾಣಿಕರು), ಅಂದರೆ ೩೩-೪೫% ಮಾತ್ರ ಸಾರ್ವಜನಿಕ ಸಾರಿಗೆ ಬಳಸುತ್ತಿದ್ದಾರೆ. ಸಂಚಾರ ದಟ್ಟಣೆ ತಗ್ಗಿಸಲು ಈ ಪ್ರಮಾಣವನ್ನು ಕನಿಷ್ಠ ೬೦%ಕ್ಕೆ ಏರಿಸಬೇಕು. ಉದಾಹರಣೆಗೆ, ಹಾಂಗ್ ಕಾಂಗ್ (೮೦%) ಮತ್ತು ಸಿಂಗಪುರ್ (೬೫%) ನಂತಹ ಪ್ರಮುಖ ಜಾಗತಿಕ ನಗರಗಳು ಇದನ್ನು ಸಾಧಿಸಿವೆ. ಬಸ್, ಮೆಟ್ರೋ ಸೇವೆಗಳನ್ನು ನಗರದಾದ್ಯಂತ ಮೂಲೆ ಮೂಲೆಗೂ ವಿಸ್ತರಿಸುವುದು ಮುಖ್ಯವಾಗಿದೆ. ನಿಧಾನಗತಿಯಲ್ಲಿ ಸಾಗುತ್ತಿರುವ ಮೆಟ್ರೋ ಕಾಮಗಾರಿಯನ್ನು ತ್ವರಿತಗೊಳಿಸಿ, ಮೆಟ್ರೋ ಜಾಲವನ್ನು ಪ್ರಸ್ತುತ ೧೦೩ ಕಿ.ಮೀ ನಿಂದ ವಿಸ್ತರಿಸುವುದು ಉಪಯುಕ್ತ. ಅದೇ ರೀತಿ ಬಸ್ಸುಗಳ ಸಂಖ್ಯೆಯನ್ನು ಈಗಿರುವ ಸುಮಾರು ೭,೦೦೦ದಿಂದ ಸಮಗ್ರ ಸಂಚಾರ ಯೋಜನೆಯಲ್ಲಿ (ಸಿಎಂಪಿ) ನಿರೂಪಿಸಿದಂತೆ ೧೩,೦೦೦ಕ್ಕೆ ಹೆಚ್ಚಿಸಿ ಸೇವೆಗಳನ್ನು ವಿಸ್ತರಿಸುವುದು ಅವಶ್ಯಕ.

 

ಬಸ್ ಮತ್ತು ಮೆಟ್ರೋ ನಿಲ್ದಾಣಗಳಿಗೆ ಸುಗಮವಾಗಿ ತಲುಪಲು ಮೊದಲ ಮತ್ತು ಕೊನೆಯ ಹಂತದ ಸಂಪರ್ಕವನ್ನು (ಫಸ್ಟ್ ಅಂಡ್ ಲಾಸ್ಟ್ ಮೈಲ್ ಕನೆಕ್ಟಿವಿಟಿ) ಬಲಪಡಿಸಬೇಕು. ಈಗಿರುವ ಮೆಟ್ರೋ ಫೀಡರ್ ಬಸ್ ಸೇವೆಗಳ ಜೊತೆಗೆ ಇತರ ಗುಂಪು ಸಾರಿಗೆ (ಷೇರ್ಡ್ ಮೊಬಿಲಿಟಿ) ವ್ಯವಸ್ಥೆಗಳಿಗೆ (ಉದಾ. ಷೇರ್ ಆಟೋ) ಉತ್ತೇಜನ ನೀಡುವುದು ಮುಖ್ಯವಾಗಿದೆ. ಕಾರ್ ಪೂಲಿಂಗ್ ಸಹ ದಟ್ಟಣೆ ನಿರ್ವಹಣೆಯಲ್ಲಿ ಪರಿಣಾಮಕಾರಿ. ಷೇರ್ ಆಟೋ ಮತ್ತು ಕಾರ್ ಪೂಲಿಂಗ್‌ಗೆ ಇರುವ ಕಾನೂನು ಅಡಚಣೆಗಳನ್ನು ನಿವಾರಿಸಿ ಅವುಗಳನ್ನು ನಿಯಮಿತಗೊಳಿಸುವುದು ಸೂಕ್ತ. ಸ್ಪರ್ಧಾತ್ಮಕ ದರದಲ್ಲಿ ಫಸ್ಟ್ ಅಂಡ್ ಲಾಸ್ಟ್ ಮೈಲ್ ಕನೆಕ್ಟಿವಿಟಿ ಕೊಡುವ ಬೈಕ್ ಟ್ಯಾಕ್ಸಿ ಸೇವೆಗಳಿಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯ ಹಸಿರು ನಿಶಾನೆ ತೋರಿಸಿರುವುದು ಸುಸ್ಥಿರ ಸಾರಿಗೆಯ ದೃಷ್ಟಿಯಿಂದ ಸ್ವಾಗತಾರ್ಹ. ಖಾಸಗಿ ಕಂಪನಿಗಳು ಸಹ ತಮ್ಮ ಸಿಬ್ಬಂದಿಗಳಿಗೆ ಬಸ್ ಮತ್ತು ಮೆಟ್ರೋ ಬಳಸುವಂತೆ ಪ್ರೋತ್ಸಾಹಿಸುವುದು ಅತ್ಯಗತ್ಯ, ಬಯೋಕಾನ್ ಸಂಸ್ಥೆ ಇದಕ್ಕೊಂದು ಒಳ್ಳೆಯ ಉದಾಹರಣೆ.

ಬಸ್ ಮತ್ತು ಮೆಟ್ರೋ ಬಳಕೆಗೆ ಪ್ರೋತ್ಸಾಹದಾಯಕ ಕ್ರಮಗಳ ಜೊತೆಗೆ ವಾಹನ ಬಳಕೆ ನಿಯಂತ್ರಿಸಲು ಕೆಲವು ಕಠಿಣ ಕ್ರಮಗಳು ಸಹ ಅತ್ಯವಶ್ಯಕ. ಗ್ರೇಟರ್ ಬೆಂಗಳೂರು ಪ್ರದೇಶ ಪಾರ್ಕಿಂಗ್ (೨೦೨೬) ಕರಡು ನಿಯಮಗಳಲ್ಲಿ ಪ್ರಸ್ತಾಪಿಸಿರುವ ವಸತಿ ಪ್ರದೇಶ ಮತ್ತು ರಸ್ತೆ ಬದಿ (ಆನ್-ಸ್ಟ್ರೀಟ್) ಪಾರ್ಕಿಂಗ್ ಶುಲ್ಕಗಳು ದಟ್ಟಣೆ ನಿರ್ವಹಣೆಯಲ್ಲಿ ತುಂಬಾ ಸ್ವಾಗತಾರ್ಹ. ಇವುಗಳನ್ನು ನಗರದಾದ್ಯಂತ ವಿಸ್ತರಿಸುವುದು ಮತ್ತು ದರಗಳನ್ನು ಪರಿಷ್ಕರಿಸುವುದು ಅವಶ್ಯಕ. ಸಿಂಗಪುರ್ ನಂತೆ ಕಾರ್ ಖರೀದಿಗೆ ಹಕ್ಕುಪತ್ರ ಕಡ್ಡಾಯ ಮಾಡುವುದರ ಮತ್ತು ಗರಿಷ್ಠ ಅವಧಿಗಳಲ್ಲಿ ಸಂಚಾರ ದಟ್ಟಣೆ ಶುಲ್ಕ ವಿಧಿಸುವುದರ ಬಗ್ಗೆಯೂ ಸಂಬಂಧಪಟ್ಟ ಇಲಾಖೆಗಳು ಪರಿಶೋಧಿಸಬಹುದು.

ಈ ಕ್ರಮಗಳ ಅನುಷ್ಠಾನದಿಂದ ಬೆಂಗಳೂರಿನಲ್ಲಿ ಸುಗಮ, ಸುಸ್ಥಿರ ಸಂಚಾರದ ಕನಸು ನನಸಾಗಬಹುದು. ಇಲ್ಲವಾದಲ್ಲಿ ಅದು ಒಂದು ಮರೀಚಿಕೆಯಾಗಿಯೇ ಉಳಿದುಬಿಡುತ್ತದೆ.